ಮಡಿವಾಳ ಮಾಚಯ್ಯ-
	12ನೆಯ ಶತಮಾನ. ಬಸವಣ್ಣನ ಸಮಕಾಲೀನ ಹಾಗೂ ನಿಷ್ಠಾವಂತ ಭಕ್ತ, ಶಿವಶರಣ. ಈತ ವೀರಭದ್ರನ ಅವತಾರ ಎಂದೂ ಹೇಳುತ್ತಾರೆ. ಶರಣರ ಬಟ್ಟೆಗಳನ್ನು ಮಡಿ ಮಾಡುವುದು ಈತನ ನಿತ್ಯಕಾಯಕ. ಈತನ ಶಿವಶಕ್ತಿ, ಶೈವನಿಷ್ಠೆ ಅವರ್ಣನೀಯ. ಟೊಂಕದಲ್ಲೊಂದು ಕಠಾರಿ ಹೆಗಲಮೇಲೆ ಮಡಿವಸ್ತ್ರಗಳ ಮೂಟೆ ಹೊತ್ತು ಎಡಗೈಯಲ್ಲಿ ಗಂಟೆ ಬಾರಿಸುತ್ತ, ಬಲಗೈಯಲ್ಲಿ ಖಡ್ಗ ಜಳಪಿಸುತ್ತ "ಆಚೆಗೆ ತೊಲಗಿರಿ, ಶರಣರ ಬಟ್ಟೆಗಳನ್ನು ಮುಟ್ಟಿದರೆ ಪ್ರಾಣ ಉಳಿಯದು" ಎಂದು ಸಾರುತ್ತ ಬೀದಿವಿಡಿದು ಹೊರಟ ಮಾಚಯ್ಯನ ಠೀವಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಅಷ್ಟೊಂದು ದರ್ಪ ಮಾಚಯ್ಯನದು. ಶರಣರ ಬಟ್ಟೆಗಳನ್ನು ಭವಿಗಳು ಮುಟ್ಟಬಾರದೆಂಬುದೇ ಈತನ ಛಲ.

	ಬಿಜಾಪುರ ಜಿಲ್ಲೆಯ ಹಿಪ್ಪರಿಗೆ ಈತನ ಜನ್ಮಸ್ಥಳ ಎಂದು ಹೇಳಲಾಗಿದೆ. ಈತನ ತಂದೆ ಪರ್ವತಯ್ಯ. ಬಟ್ಟೆಗಳನ್ನು ತೊಳೆದು ಮಡಿಮಾಡುವುದು ಇವನ ಉದ್ಯೋಗವಾಗಿತ್ತು. ಮಾಚಿದೇವನಿಗೆ ಈ ಉದ್ಯೋಗ ಹಿಡಿಸಲಿಲ್ಲ. ಮನಸ್ಸು ಶರಣರ ಬೆನ್ನು ಹತ್ತಿತ್ತು. ಪ್ರತಿನಿತ್ಯ ತನ್ನ ಊರಿನ ಕಲ್ಲಿನಾಥ ದೇವರನ್ನು ಭಕ್ತಿಯಿಂದ ಪೂಜೆಮಾಡುತ್ತಿದ್ದ. ಚಿಕ್ಕವನಿರುವಾಗಲೇ ಮಲ್ಲಿಕಾರ್ಜುನ ಪಂಡಿತರಿಂದ ದೀಕ್ಷೆ ಪಡೆದು ಬಸವಣ್ಣನವರಿದ್ದ ಕಲ್ಯಾಣಕ್ಕೆ ಸಾಗಿದ. ಶರಣರ ಬಟ್ಟೆಗಳನ್ನು ಮಡಿಮಾಡುವ ಕಾಯಕದಲ್ಲಿ ನಿರತನಾದ. ವೀರಶೈವ ತತ್ತ್ವವನ್ನು ಅರಿತು ಮಹೇಶ್ವರ ಸ್ಥಲದಲ್ಲಿ ನಿಂದು, ಶುದ್ಧಕಾಯಕನಿರತನಾಗಿ ಅಲ್ಪ ಕಾಲದಲ್ಲಿಯೇ ಶರಣರ ಶರಣ ಎನಿಸಿಕೊಂಡ.

	ಈತನ ಬಗೆಗಿನ ಒಂದು ಕಥೆ ಹೀಗಿದೆ: ಒಂದು ಸಂಜೆ ಮಾಚಯ್ಯ ನಿತ್ಯದಂತೆ ಮಡಿಬಟ್ಟೆ ಹೊತ್ತು ಕಲ್ಯಾಣದ ಬೀದಿಯಲ್ಲಿ ಬರುತ್ತಿದ್ದ. ಒಬ್ಬ ಕಿಡಿಗೇಡಿ ಮಡಿಮಾಡಿದ ಬಟ್ಟೆ ಮುಟ್ಟಿ ಮೈಲಿಗೆ ಮಾಡಿ ನಕ್ಕುಬಿಟ್ಟ. ಮಾಚಿದೇವನ ಕೋಪ ನೆತ್ತಿಗೇರಿತು. ಕಣ್ಣಲ್ಲಿ ಕಿಡಿ ಸಿಡಿದೆದ್ದವು. ತನ್ನ ವ್ರತಕ್ಕೆ ಭಂಗವಾಯಿತೆಂದು ಭಾವಿಸಿ ಆ ಭವಿಯ ರುಂಡವನ್ನೇ ಹಾರಿಸಿದ. ಪಟ್ಟಣದಲ್ಲಿ ಕೋಲಾಹಲವೆದ್ದಿತು. ಹಲವರು ಶರಣರ ವಿರುದ್ಧ ಬಿಜ್ಜಳ ಭೂಪತಿಯಲ್ಲಿ ದೂರಿಕೊಂಡರು. ಮಾಚಯ್ಯನನ್ನು ಹಿಡಿದು ತರಲು ಬಿಜ್ಜಳ ಆಜ್ಞೆಮಾಡಿದ. ಅದನ್ನು ಕೇಳಿದ ಬಸವಣ್ಣನವರು "ದೊರೆ, ತಪ್ಪು ಯಾರದೆಂದು ನಿಶ್ಚಯಿಸದೆ ಈ ರೀತಿ ದುಡುಕಬೇಡಿ. ಮಡಿವಾಳ ಮಾಚಿದೇವ ಸಾಮಾನ್ಯ ಭಕ್ತನಲ್ಲ; ಅವನದು ವೀರಭದ್ರನ ಅವತಾರ. ಮೊರೆಹೊಕ್ಕವರನ್ನು ರಕ್ಷಿಸುವ. ಮಾರಾಂತವರನ್ನು ಶಿಕ್ಷಿಸುವ ನಿಷ್ಠೆ ಅವನದು. ಶರಣರ ಮಡಿಬಟ್ಟೆಗಳನ್ನು ಪರರಿಗೆ ಮುಟ್ಟಿಸನೆಂಬುದು ಆತನ ವ್ರತ. ವಿಚಾರ ಮಾಡಿರಿ" ಎಂದು ಹೇಳಿದರು. ಬಿಜ್ಜಳನಿಗೆ ಏನೂ ತೋಚಲಿಲ್ಲ. ಪರಿಚಾರಕರು ಮಾಚಿದೇವನ ಸಮೀಪಕ್ಕೆ ಹೋಗಲಾರದೆ ಓಡಿ ಬಂದರು. ಬಿಜ್ಜಳನ ಕೋಪ ಮೇರೆ ಮೀರಿತು. ಮಾಚಯ್ಯನನ್ನು ಆನೆಯ ಕಾಲಲ್ಲಿ ಹಾಕಿ ತುಳಿಸಲು ಆಜ್ಞೆ ಮಾಡಿದ.

	ನಿತ್ಯದಂತೆ ಮಾಚಯ್ಯ ಮಡಿಬಟ್ಟೆ ಹೊತ್ತು ತರುತ್ತಿದ್ದಾಗ ಪಟ್ಟದಾನೆಯನ್ನು ಅವನ ಮೇಲೆ ಓಡಿಸಲಾಯಿತು. ಮಾಚಿದೇವ ಆನೆಯ ಸೊಂಡಿಲನ್ನು ಹಿಡಿದು ನೆಲಕ್ಕಪ್ಪಳಿಸಿ ಅದನ್ನು ಕೊಂದುಹಾಕಿದ. ಅಂದಿನಿಂದ ಅವನ ಗೋಜಿಗೆ ಯಾರೂ ಹೋಗಲಿಲ್ಲ.

	ಮುಂದೆ ಕಲ್ಯಾಣದ ಶರಣರಿಗೆ ಅಗ್ನಿಪರೀಕ್ಷೆಗಳು ಮೇಲಿಂದ ಮೇಲೆ ಉದ್ಭವಿಸಿದವು. ಹರಳಯ್ಯ ಮಧುವಯ್ಯರಿಗೆ ಬಂದ ತೊಂದರೆ ಶರಣ ಸಮಾಜವನ್ನೇ ರೊಚ್ಚಿಗೆಬ್ಬಿಸಿತು. ಬಸವಣ್ಣನವರು ಭಕ್ತರ ಅಮಾನುಷ ಕೊಲೆಯನ್ನು ಸಹಿಸಲಾರದೆ ಕಪ್ಪಡಿ ಸಂಗಮಕ್ಕೆ ತೆರಳಿದರು. ಶರಣರಿಗೂ ಭವಿಗಳಿಗೂ ತಿಕ್ಕಾಟ ಆರಂಭವಾಯಿತು. ಬಿಜ್ಜಳ ಶರಣರಿಗೆ ಅನುಕೂಲನಾಗಲಿಲ್ಲ. ಅಳಿಯ ಬಿಜ್ಜಳ ದೇವಶರಣರನ್ನು ಕಲ್ಯಾಣದಿಂದ ಹೊರಗಟ್ಟಲು ಸೈನ್ಯಸಿದ್ಧತೆ ನಡೆಸಿದ. ಚನ್ನಬಸವಣ್ಣನ ಮುಖಂಡತ್ವದಲ್ಲಿ ಶರಣರೆಲ್ಲ ಸೇರಿ ಸ್ವರಕ್ಷಣೆಗೆ ಸಿದ್ಧರಾದರು. ಕಲ್ಯಾಣದ ಶಾಂತಿ ಕದಡಿತು. ಅಲ್ಲಿರುವುದೇ ಅನುಚಿತವೆಂದು ಬಗೆದ ಬಸವಣ್ಣ ಶರಣರನ್ನೊಳಗೊಂಡು ಉಳವಿಯ ಗೊಂಡಾರಣ್ಯಕ್ಕೆ ಸಾಗುವ ನಿರ್ಧಾರಮಾಡಿದ. ಅವರೊಡನೆ ಹೊರಟ ಶರಣರ ತಂಡದಲ್ಲಿ ಅಕ್ಕನಾಗಮ್ಮ, ಮಡಿವಾಳ ಮಾಚಯ್ಯ, ಕಿನ್ನರಿ ಬೊಮ್ಮಯ್ಯ, ಕೂಗಿನ ಮಾರಿತಂದೆ, ರುದ್ರಮುನಿ, ಪಡಿಹಾರಿ ಉತ್ತಣ್ಣ, ಹಡಪದ ರೇಚಣ್ಣ ಮೊದಲಾದ ಶರಣಶರಣೆಯರು ಪ್ರಮುಖರಾಗಿದ್ದರು. ಈ ಶರಣ ಸೇನೆಗೆ ಅಧಿಪತಿಯಾಗಿ ಬಿಜ್ಜಳನ ಸೈನ್ಯದೊಡನೆ ಕಾದುತ್ತ ಬಂದ ಶ್ರೇಯಸ್ಸು ಮಡಿವಾಳ ಮಾಚಯ್ಯನಿಗೆ ಸಲ್ಲುವುದು. ಮುರಗೋಡದಲ್ಲಿ ನಡೆದ ಕಾಳಗ ಭಯಂಕರವಾಯಿತು. ಮಡಿವಾಳ ಮಾಚಯ್ಯ ಅಳಿಯ ಬಿಜ್ಜಳನನ್ನು ಸೆರೆಹಿಡಿದು ನಾಗಲಾಂಬಿಕೆಯ ಮಾತಿನಂತೆ ಆತನಿಗೆ ಜೀವದಾನ ನೀಡಿದ. ಶರಣರು ಹೋರಾಡಿ ವಿಜಯಗಳಿಸಿದ ಸ್ಥಾನಗಳಲ್ಲಿ ವೀರಭದ್ರನನ್ನು ಸ್ಥಾಪಿಸುತ್ತ ಬಂದಿರಬೇಕೆಂದು ಎನಿಸುತ್ತದೆ. ಕಲ್ಯಾಣದಿಂದ ಉಳವಿಯವರೆಗೆ ಶರಣರು ನಡೆದ ಮಾರ್ಗದಲ್ಲೆಲ್ಲ ವೀರಭದ್ರ ದೇವರ ಗುಡಿಗಳಿದ್ದುದು ಗಮನಾರ್ಹ. ಅಂಥ ಪ್ರತಿಮೆಗಳಲ್ಲಿ ಗೊಡಚಿಯ ವೀರಭದ್ರನು ಭವ್ಯತಮ. ಮುರಗೋಡದಿಂದ ಮಾಚಯ್ಯ ತನ್ನ ಇಷ್ಟದೇವತೆಯನ್ನು ನೆನೆದು ಹಿಪ್ಪರಿಗೆಗೆ ಹೋಗಿರಬೇಕು. ಈತನ ಗದ್ದುಗೆ ಹಿಪ್ಪರಿಗೆಯಲ್ಲಿ ಇದೆ.

	ಮಡಿವಾಳ ಮಾಚಿದೇವ ಕಾಯಕನಿಷ್ಠ. ಶರಣರ ಸೇವೆಗೈದು ಹಿರಿಯ ಶರಣ ಪದವಿಗೇರಿದ. ಈತ ಕವಿಯೂ ಹೌದು. ಈತ ರಚಿಸಿದ ವಚನಗಳು ಪ್ರಸಿದ್ಧವಾಗಿವೆ. ಕಲ್ಲಿನಾಥ ಎಂಬುದು ಈತನ ವಚನಗಳ ಅಂಕಿತ. ಭಾವಕ್ಕೆ ಅನುಗುಣವಾದ ಭಾಷೆಯನ್ನು ಉಪಯೋಗಿಸುವ ಶಕ್ತಿ ಮಾಚಯ್ಯನದು. ನ್ಯಾಯನಿಷ್ಠುರ ನಿರ್ದಾಕ್ಷಿಣ್ಯಪರವಾದ ಈತನ ವಚನಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಎನ್ನಬಹುದು.
(ಎಂ.ಎಸ್.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ